ಕಂಚುಗಾರ ಕುಕ್ಕ : ಪಕ್ಷಿವರ್ಗದ ಸಿಕೊನಿಯಿಫಾರ್ಮಿಸ್ ಗಣದ ಸಿಕೋನಿಯೀ ಉಪಗಣದ ಸಿಕೊನೈಯಿಡೀ ಕುಟುಂಬಕ್ಕೆ ಸೇರಿದ ಪಕ್ಷಿ (ಸ್ಪಾರ್ಕ್), ಇದಕ್ಕೆ ನೀಳವಾದ ಕತ್ತು, ಉದ್ದನೆಯ ದಪ್ಪನಾಗಿ ನೇರವಾಗಿರುವ ಕೊಕ್ಕು, ಉದ್ದವಾದ ಕಾಲುಗಳಿವೆ. ಪಾದಗಳಲ್ಲಿ ಬಲೆ ಸಂಪುರ್ಣವಾಗಿಲ್ಲ. ಉಗುರುಗಳು ಚಪ್ಪಟೆಯಾಗಿ ಸಣ್ಣವಾಗಿವೆ. ಕಾಲನ್ನು ಒರಟಾಗಿರುವ ವಡಿವತ್ತಳೆಯ ಮೇಲೆ ಊರುವುದು. ರೆಕ್ಕೆಗಳು ಅಗಲವಾಗಿಯೂ ಉದ್ದವಾಗಿಯೂ ಇವೆ. ಬಾಲದ ರೆಕ್ಕೆಗಳು ಸಣ್ಣ. ಫರ್ಕುಲ U-ರೀತಿ ಇರುವುದು. ನಾಲಗೆ ಸಣ್ಣ.

ಇವು ಸಾಧಾರಣವಾಗಿ ಪುಕ್ಕಲು ಸ್ವಭಾವದ ಹಕ್ಕಿಗಳು. ಸಾಮಾನ್ಯವಾಗಿ ವನ್ಯ ಅಥವಾ ಹುಲ್ಲುಗಾವಲು ಪ್ರದೇಶಗಳಲ್ಲಿ ನೀರಿರುವ ಸ್ಥಳಗಳಲ್ಲಿರುತ್ತವೆ. ಇವುಗಳ ಹಾರಾಟ ಆಕರ್ಷಕವಾಗಿರುವುದು. ಇವು ಬಲವಾಗಿ ತ್ವರಿತವಾಗಿ ಆದರೆ ಶಬ್ದ ಮಾಡದೆ ಹಾರುತ್ತವೆ. ಹಾರುವಾಗ ಕತ್ತನ್ನೂ ಕಾಲುಗಳನ್ನೂ ತಮ್ಮ ದೇಹದ ನೇರಕ್ಕೆ ಚಾಚಿ ಸುತ್ತುಸುತ್ತಾಗಿ ಹಾರಿ ಬಹಳ ಎತ್ತರಕ್ಕೆ ಏರುತ್ತವೆ. ನೆಲದ ಮೇಲೆ ಸುಲಭವಾಗಿ ನಡೆಯಬಲ್ಲವು. ವಿಶ್ರಮಿಸುವಾಗ ಅಂಗಾಲನ್ನು ನೆಲದ ಮೇಲೂರುತ್ತವೆ. ಹಗಲಿನಲ್ಲಿ ಶಾಖ ಹೆಚ್ಚಿದ್ದಾಗ ನಿಶ್ಚಲವಾಗಿ ಕೂತಿರುತ್ತವೆ. ಮೀನು, ಸರೀಸೃಪಗಳು, ದ್ವಿಚರಿಗಳು, ಕಠಿಣಚರ್ಮಿಗಳು, ಮೃದ್ವಸ್ಥಿಗಳು, ಮಿಡತೆಗಳು ಮತ್ತು ಜೀರುಂಡೆಗಳು ಇವುಗಳ ಆಹಾರ. ಕೆಲವು ವೇಳೆ ಚಿಕ್ಕ ಸ್ತನಿಗಳು ಅಥವಾ ಮೊಟ್ಟೆಗಳು ಮತ್ತು ಸಣ್ಣ ಹಕ್ಕಿಗಳನ್ನೂ ತಿನ್ನುತ್ತವೆ.

ಸಾಮಾನ್ಯವಾಗಿ ಎತ್ತರವಾದ ಮರಗಳಲ್ಲಿ, ಗುಡ್ಡಗಳಲ್ಲಿ, ಬಂಡೆಗಳ ಸಣ್ಣಗವಿಗಳಲ್ಲಿ ಅಥವಾ ಗುಡ್ಡಗಳ ಮೇಲಿನ ಚಪ್ಪಟೆ ಜಾಗಗಳಲ್ಲಿ ಗೂಡುಗಳನ್ನು ಕಟ್ಟುತ್ತವೆ. ಗೂಡನ್ನು ಸಣ್ಣ ಕಡ್ಡಿಗಳಿಂದ ಕಟ್ಟಿ ಅದರ ಮೇಲೆ ಅನೇಕ ವೇಳೆ ಒಂದು ಪದರ ಹುಲ್ಲನ್ನೋ ಎಲೆಗಳನ್ನೊ ಅಥವಾ ಪುಕ್ಕಗಳನ್ನೋ ಹರಡುತ್ತವೆ. ಕೆಲವು ಸಾರಿ ಇವನ್ನು ಹರಡದೆಯೂ ಇರಬಹುದು. ಗೂಡು ಕಟ್ಟಲು ಜೇಡಿಮಣ್ಣನ್ನು ಉಪಯೋಗಿಸುವುದೂ ಉಂಟು. ಸಾಧಾರಣವಾಗಿ ಋತುಕಾಲದಲ್ಲಿ ಅನೇಕ ಹಕ್ಕಿಗಳು ಒಂದೇ ಕಡೆ ಗುಂಪು ಸೇರುತ್ತವೆ. ಕೆಲವು ಬಗೆಗಳು ಮಾತ್ರ ದೂರದೂರವಾಗಿ ಗೂಡು ಕಟ್ಟುವುದೂ ಉಂಟು. ಇವು ಒಂದು ಸಲಕ್ಕೆ 3-6 ಬಿಳುಪಾದ ಮೊಟ್ಟೆಗಳನ್ನಿಡುತ್ತವೆ. ಗಂಡುಹೆಣ್ಣುಗಳೆರಡೂ ಮೊಟ್ಟೆಗಳಿಗೆ ಸಾಧಾರಣವಾಗಿ 4 ವಾರ ಕಾಲ ಕಾವನ್ನು ಕೊಡುವುವು. ತಾಯಿ ಮರಿಗಳಿಗೆ ಗುಟುಕು ಕೊಡುವಾಗ ಗಂಡು ಅವನ್ನು ಕಾಯುವುದು. ಭಾರತದಲ್ಲಿ ಒಟ್ಟು ಒಂಬತ್ತು ಪ್ರಭೇದದ ಕುಕ್ಕಗಳು ಕಂಡುಬರುತ್ತವೆ. ಇವುಗಳಲ್ಲಿ ಬಣ್ಣದ ಬಕ (ಮಿರಿಸ್ಟಿಕ ಟ್ರಕೊಸಿಫಾಲ) ಕಪ್ಪು ಕತ್ತಿನ ಕುಕ್ಕ (ಎಢಿಪ್ಟಿಯೊರಿಂಚಸ್ ಏಷಿಯಾಟಿಕಸ್) ಗಳು ಅಪಾಯಯದಂಚಿನಲ್ಲಿದ್ದರೆ, ಸಣ್ಣ  ಅಡ್ಜುಜಂಟ್ ಕುಕ್ಕ (ಲೆಪ್ಟೊಸ್ಟಿಲೋಸ್ ಜವಾನಿಕಸ್) ಅಪಾಯಕ್ಕೆ ಪಕ್ಕಾಗುವಂತಿದೆ. ದೊಡ್ಡ ಅಡ್ಜುಜಂಟ್ ಕುಕ್ಕ (ಲೆಪ್ಟೊಸ್ಟಿಯೊಸ್ ಡೂಬಿಯಸ್) ಈಗಾಗಲೇ ಅಪಾಯಕ್ಕೊಳಗಾಗಿವೆ. (ನೋಡಿ : ಬಣ್ಣದ ಬಕ)	(ಎನ್.ಪಿ.ಎ.; ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ